ಬೃಹನ್ನಳೆ
ಅರ್ಜುನನ ನಾಮಾಂಕಿತ. ಪಾಂಡವರು ಅಜ್ಞಾತವಾಸ ಮಾಡುತ್ತಿದ್ದಾಗ ವಿರಾಟನಗರದಲ್ಲಿ ವಿರಾಟರಾಜನ ಮಗಳಿಗೆ ಗಂಧರ್ವವಿದ್ಯೆ ಕಲಿಸುತ್ತಿದ್ದಾಗ ನಪುಂಸಕ ವೇಷದಲ್ಲಿದ್ದ ಅರ್ಜುನ ಇಟ್ಟುಕೊಂಡ ಹೆಸರು. ಶಾಪವೇ ವರವಾದ ಘಟನೆ. ಇಂದ್ರಕೀಲ ಪರ್ವತದಿಂದ ಸ್ವರ್ಗಕ್ಕೆ ಹೋದಾಗ ಊರ್ವಶಿ ಅರ್ಜುನನ ಸೌಂದರ್ಯಕ್ಕೆ ಮರುಳಾದಳು. ತನ್ನ ಇಷ್ಟಾರ್ಥ ನೆರವೇರದಿದ್ದಾಗ ನಪುಂಸಕನಾಗು ಎಂದು ಶಾಪವಿತ್ತಳು. ಇದರಿಂದ ಅರ್ಜುನ ಮುಂದೆ ಅದು ಇಚ್ಛಿತಕಾಲದಲ್ಲಿ ಪ್ರಯೋಜಕಾರಿ ಎಂಬುದನ್ನು ತಿಳಿದು ಮರಳಿದ. ಅಜ್ಞಾತ ವಾಸದಲ್ಲಿ ಒಂದು ವರ್ಷ ನಪುಂಸಕನಾದ. ಕೌರವರು ವಿರಾಟನ ಉತ್ತರ ದಿಕ್ಕಿನ ಗೋವುಗಳನ್ನು ಸೆರೆಹಿಡಿದಾಗ ಬೃಹನ್ನಳೆ ಸೈರಂಧ್ರಿಯ (ದ್ರೌಪದಿ) ಮೂಲಕ ಉತ್ತರಕುಮಾರನಿಗೆ ತನ್ನ ಸಾಮಥ್ರ್ಯ ತಿಳುಹಿಸಿ ತಾನು ಅವನಿಗೆ ಸಾರಥಿಯಾಗಲು ಸಮ್ಮತಿಸುವಂತೆ ಮಾಡೆಂದು ಹೇಳಿದ. ಅನಂತರ ಉತ್ತರನ ಸಂಗಡ ಯುದ್ಧಕ್ಕೆ ಹೊರಟು ಕೌರವರೊಂದಿಗೆ ಯುದ್ಧ ಮಾಡಿ ಗೋವುಗಳನ್ನು ಬಿಡಿಸಿ ತಂದ. 									

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ